ರಾಜ್ಯ - 
ರಾಜಕೀಯವಾಗಿ ಸಂಘಟಿತವಾದ ಮಾನವ ಸಮೂಹ ಮತ್ತು ಸರ್ಕಾರದ ವಿವಿಧ ಸಂಸ್ಥೆಗಳನ್ನೊಳಗೊಂಡ ಒಂದು ವ್ಯವಸ್ಥೆ (ಸ್ಟೇಟ್). ಮಾನವ ಸಾಮಾಜಿಕ ಪ್ರಾಣಿ. ಸಮಾಜದೊಳಗೇ ಜೀವಿಸುವ ವ್ಯಕ್ತಿ; ಸಮಾಜದ ಆವಶ್ಯಕತೆ ಇಲ್ಲವೆಂದರೆ ಆತನನ್ನು ಗ್ರೀಕ್ ತತ್ತ್ವಜ್ಞಾನಿ ಅರಿಸ್ಟಾಟಲ್ ಬಲು ಮಾರ್ಮಿಕವಾಗಿ ದೇವತೆ ಅಥವಾ ಪಶುಗಳಿಗೆ ಹೋಲಿಸುತ್ತಾನೆ. ಮಾನವ ಸಮಾಜದೊಳಗೇ ತನ್ನ ರಕ್ಷಣೆಯನ್ನು ಕಂಡುಕೊಳ್ಳಬೇಕಾಗುತ್ತದೆ. ಮಾನವನ ಬದುಕು ಸಮಾಜದಲ್ಲಿ ಲೀನವಾದದ್ದು. ಮಾನವನಲ್ಲಿ ಈ ಸಾಮಾಜಿಕತೆಯ ಜೊತೆಗೆ ಹಲವಾರು ಸಮಾಜ ವಿರೋಧಿ ಗುಣಗಳೂ ಅಡಕವಾಗಿವೆ. ಉದಾಹರಣೆಗೆ ಅಹಂಕಾರ, ವೈಮನಸ್ಯ ಸ್ಪರ್ಧೆ, ಹೋರಾಟ ಪ್ರವೃತ್ತಿ ಮುಂತಾದವು. ಮಾನವ ಜೀವನದ ಹಲವಾರು ವೈಷಮ್ಯಗಳಿಗೆ ಈ ಮೂಲ ದ್ವಂದ್ವಗುಣಗಳೇ ಕಾರಣವೆಂದು ಹೇಳಬಹುದು. ಈ ಬಗೆಯ ಮಾನವರನ್ನು ಹಾಗೇ ಬಿಟ್ಟರೆ, ಸಮಾಜದಲ್ಲಿ ಭದ್ರತೆ ಮತ್ತು ಶಿಸ್ತುಗಳ ತೀವ್ರ ಕೊರತೆಯುಂಟಾಗುವುದು. ಈ ಕೊರತೆಯ ನಿವಾರಣೆಯೇ ರಾಜ್ಯ ಎಂಬ ವ್ಯವಸ್ಥೆಯ ಮೂಲ ಮತ್ತು ಮುಖ್ಯ ಉದ್ದೇಶ. ಕಾಲಾನುಕ್ರಮವಾಗಿ ಮಾನವರಲ್ಲಿ ಸಭ್ಯತೆಯ ವಿಕಾಸವಾದಂತೆ ನ್ಯಾಯ, ಸ್ವಾತಂತ್ರ್ಯ ಮುಂತಾದ ಉದಾತ್ತ ಧ್ಯೇಯಗಳನ್ನು ಸಾಧಿಸುವ ಒಂದು ಮಹತ್ತ್ವಪೂರ್ಣಸಾಧನೆಯಾಗಿ ರಾಜ್ಯ ವಿಕಸಿಸಿದೆ. ಮಾನವ ಸಭ್ಯನಾಗರಿಕನಾಗುತ್ತ ರಾಜ್ಯದ ಇತಿಹಾಸದ ಬೆಳೆವಣಿಗೆಯನ್ನು ನಾವು ಕಾಣುತ್ತೇವೆ. ರಾಜ್ಯವಿಲ್ಲದೆ ಸಾಮಾಜಿಕ ಭದ್ರತೆ ಮತ್ತು ಮಾನವ ಸಭ್ಯತೆ ಸಾಧ್ಯವಿಲ್ಲವೆಂಬುದು ರಾಜಕೀಯ ತಜ್ಞರ ಅಭಿಮತ.

ಇಲ್ಲಿ ಸ್ಥೂಲಾರ್ಥದಲ್ಲಿ `ರಾಜ್ಯ ಪದವನ್ನು ಸರ್ಕಾರದ (ಗೌರ್ನಮೆಂಟ್) ಪರ್ಯಾಯವಾಗಿ ಉಪಯೋಗಿಸಲಾಗಿದೆ. ಆದರೆ ನ್ಯಾಯಶಾಸ್ತ್ರ ಮತ್ತು ರಾಜ್ಯಶಾಸ್ತ್ರಗಳಲ್ಲಿ ರಾಜ್ಯ ಎಂಬ ಪದ ಭಿನ್ನಾರ್ಥಗಳನ್ನು ಹೊಂದಿದೆ. ಅದರಂತೆ ರಾಜ್ಯ ಎಂಬುದು ಸರ್ಕಾರಕ್ಕಿಂತ ಹೆಚ್ಚು ವ್ಯಾಪಕವಾದದ್ದು. ರಾಜ್ಯದ ಆವಶ್ಯಕ ಅಂಗಗಳು ನಾಲ್ಕು : ಒಂದು ಗೊತ್ತಾದ ಭೂಭಾಗ, ಅದರಲ್ಲಿ ವಾಸಿಸುವ ಜನಾಂಗ, ಸರ್ಕಾರ ಮತ್ತು ಸಾರ್ವಭೌಮತ್ವ. ಈ ಅರ್ಥದಲ್ಲಿ ರಾಜ್ಯ ಎಂಬ ಪದವನ್ನು 16ನೆಯ ಶತಮಾನದಿಂದ ಗುರುತಿಸಲಾಗಿದೆ.

ರಾಜ್ಯದ ರೂಪ ಭೇದಗಳು ಆ ರಾಜ್ಯದ ವಿಸ್ತಾರ, ಸರ್ಕಾರದ ಸಂಘಟನೆ ಮೊದಲಾದವುಗಳನ್ನವಲಂಬಿಸಿದೆ. ಉದಾಹರಣೆಗೆ ನಗರರಾಜ್ಯ (ಸಿಟಿ ಸ್ಟೇಟ್), ರಾಷ್ಟ್ರರಾಜ್ಯ (ನೇಷನ್ ಸ್ಟೇಟ್), ಅರಸುರಾಜ್ಯ (ಮಾನಾರ್ಕಿಯಲ್ ಸ್ಟೇಟ್), ಪ್ರಜಾರಾಜ್ಯ (ಡಮಾಕ್ರಿಟಿಕ್ ಸ್ಟೇಟ್), ಏಕಘಟಕರಾಜ್ಯ (ಯೂನಿಟರಿ ಸ್ಟೇಟ್), ಸಂಯುಕ್ತರಾಜ್ಯ (ಫೆಡರಲ್ ಸ್ಟೇಟ್), ಧರ್ಮನಿರಪೇಕ್ಷರಾಜ್ಯ (ಸೆಕ್ಯುಲರ್ ಸ್ಟೇಟ್) ಮುಂತಾದವುಗಳು.

ರಾಜ್ಯದ ಉಗಮ, ಸ್ವಭಾವ ಮತ್ತು ಉದ್ದೇಶಗಳ ಬಗ್ಗೆ ಹಲವಾರು ವಿವರಣೆಗಳಿವೆ. ಭಾರತೀಯ ಪರಂಪರೆಯಲ್ಲಿ ರಾಜ್ಯದ ಉಗಮದ ಬಗ್ಗೆ ಈ ರೀತಿ ವಿವರಿಸಲಾಗಿದೆ. ಮೊದಲು ಅರಾಜಕತೆಯಿತ್ತು, ದಂಡವಿರಲಿಲ್ಲ, ದಂಡಕನಿರಲಿಲ್ಲ. ಅಲ್ಲಿ ಮತ್ಸ್ಯನ್ಯಾಯವಿತ್ತು, ನ್ಯಾಯವಿರಲಿಲ್ಲ (ಮಹಾಭಾರತದ ಶಾಂತಿಪರ್ವ ಮತ್ತು ಮನುಸ್ಮøತಿಗಳನ್ನು ನೋಡಿ). ಸಂತ್ರಸ್ತಜನ ಬ್ರಹ್ಮನಿಗೆ ಮೊರೆಯಿಟ್ಟರು. ಆಗ ಬ್ರಹ್ಮ ವಿರಾಜಸ್ ಎಂಬಾತನನ್ನು ರಾಜನನ್ನಾಗಿ ಕಳಿಸಿ ಧರ್ಮಶಾಸ್ತ್ರದ ಪ್ರಕಾರ ನಡೆಯಲು ಆಜ್ಞಾಪಿಸಿದೆ. ಇಲ್ಲಿ ರಾಜ್ಯದ ಮುಖ್ಯ ಉದ್ದೇಶ ದುಷ್ಟದಂಡನೆ, ಶಿಷ್ಟಪಾಲನೆ ಎಂದು ಸೂತ್ರರೂಪವಾಗಿ ಹೇಳಲಾಗಿದೆ.

ಪ್ರಾಚೀನ ಗ್ರೀಕ್ ತತ್ತ್ವಜ್ಞಾನಿಗಳು `ರಾಜ್ಯ ಜೀವರಕ್ಷಣೆಗಾಗಿ ಉಗಮಿಸಿದ್ದು; ಆದ್ದರಿಂದ ನಾವು ಒಳ್ಳೆಯ ಜೀವನಕ್ಕಾಗಿ ಹೆಣಗಬೇಕು ಎಂದು ಬೋಧಿಸಿದರು. ಬೇರೆ ಬೇರೆ ಧರ್ಮಗಳು ರಾಜ್ಯದ ಉದ್ದೇಶವನ್ನು ತಮ್ಮ ತಮ್ಮ ತಾತ್ತ್ವಿಕ ತಳಹದಿಗಳಿಗೆ ಅನುಗುಣವಾಗಿ ಪ್ರತಿಪಾದಿಸಿವೆ. 

16-18 ಶತಮಾನಗಳಲ್ಲಿ ಒಪ್ಪಂದವಾದ (ಕಾಂಟ್ರಾಕ್ಚುಯಲ್ ಥಿಯರಿ) ಪ್ರಭಾವಶಾಲಿ ರಾಜಕೀಯ ಆಂದೋಲನಗಳಿಗೆ ಪ್ರೇರಣೆಯನ್ನೊದಗಿಸಿತು. ಹಾಬ್ಸ್, ಲಾಕ್ ಮತ್ತು ರೂಸೋ ಈ ವಾದದ ಮುಖ್ಯ ಪ್ರತಿಪಾದಕರು. ಇವರ ಪ್ರಕಾರ ರಾಜ್ಯದ ಉಗಮಕ್ಕೆ ಮೊದಲು ಮಾನವರು ಪ್ರಾಕೃತ ಸ್ಥಿತಿಯಲ್ಲಿದ್ದರು. ಅದು ತೀರಾ ಅಮಾನುಷ ಅಥವಾ ಅನಾಗರಿಕ ಪರಿಸ್ಥಿತಿಯಾಗಿತ್ತು. ಮುಂದೆ ಇವರು ಪರಸ್ಪರ ಒಪ್ಪಂದದ ಮೂಲಕ ಇಂಥ ಸ್ಥಿತಿಯನ್ನು ತೊರೆದು ಉತ್ತಮ ಬದುಕಿಗಾಗಿ ರಾಜ್ಯವನ್ನು ಸ್ಥಾಪಿಸಿದರು. ಈ ವಾದಕ್ಕೆ ಇತಿಹಾಸದ ಮತ್ತು ಸಮಾಜಶಾಸ್ತ್ರದ ನಿಶ್ಚಿತ ಆಧಾರವಿಲ್ಲವೆಂದು ಕೆಲವರು ಹೇಳಿದರೂ ಆಧುನಿಕ ಸಾಂವಿಧಾನಿಕ ರಾಜ್ಯದ ಬೆಳೆವಣಿಗೆಯಲ್ಲಿ ಇದರ ಪಾತ್ರ ಮುಖ್ಯವೆಂಬುದನ್ನು ಎಲ್ಲರೂ ಬಲ್ಲರು. ಭಾರತೀಯ ಪರಂಪರೆಯ ಮತ್ಸ್ಯನ್ಯಾಯ ಸಿದ್ಧಾಂತ ಮತ್ತು ಈ ವಾದದ ನಡುವೆ ಇರುವ ಸಾಮ್ಯ ಗಮನಾರ್ಹವಾಗಿವೆ; ಮುಖ್ಯವಾಗಿ ಹಾಬ್ಸ್ ಚಿತ್ರಿಸಿದ ಪ್ರಾಕೃತ ಸ್ಥಿತಿ ಮತ್ಸ್ಯನ್ಯಾಯಕ್ಕೆ ಸಮೀಪವಾದದ್ದು.

19ನೆಯ ಶತಮಾನದ ಪೂರ್ವಾರ್ಧದಲ್ಲಿ ಹೆಗಲ್ ಮತ್ತು ಇತರ ಜರ್ಮನ್ ಲೇಖಕರು ಹೀಗೆ ಪ್ರತಿಪಾದಿಸಿದರು: ರಾಜ್ಯ ಭೂಮಿಯ ಮೇಲೆ ಅಭಿವ್ಯಕ್ತಗೊಂಡ ದಿವ್ಯತೆ; ಆದಕಾರಣ ರಾಜ್ಯ ಎಲ್ಲ ವಿಧದಿಂದಲೂ ಪರಿಪೂರ್ಣ. ರಾಜ್ಯದಲ್ಲಿರುವ ಎಲ್ಲ ವ್ಯಕ್ತಿಗಳು, ಗುಂಪುಗಳು, ಸಂಘ ಸಂಸ್ಥೆಗಳು ರಾಜ್ಯ ವಿಧಿಸಿದಂತೆ ನಡೆಯಬೇಕು. ಇದರಲ್ಲಿಯೇ ಸರ್ವರ ಸ್ವಾತಂತ್ರ್ಯವೂ ಕೂಡಿದೆ. ರಾಜ್ಯದ ವಿರುದ್ಧ ಯಾರಿಗೂ ಯಾವ ಬಗೆಯ ಹಕ್ಕುಗಳೂ ಇಲ್ಲ. ಇಪ್ಪತ್ತನೆಯ ಶತಮಾನದ ಫ್ಯಾಸಿಸ್ಟ್ ರಾಜ್ಯಸಿದ್ಧಾಂತದ ವೈಚಾರಿಕ ಹಿನ್ನೆಲೆ ಮತ್ತು ಸ್ಫೂರ್ತಿಗೆ ಹೆಗಲ್‍ನ ಈ ವಿಚಾರಸರಣಿಯೇ ಬಹಳ ಮಟ್ಟಿಗೆ ಕಾರಣವೆನ್ನಬಹುದು.

ಮಾಕ್ರ್ಸ್‍ವಾದದ ವ್ಯಾಪಕ ಪ್ರಭಾವ 19ನೆಯ ಶತಮಾನದ ಕೊನೆಯಾರ್ಧದಿಂದ ಹೆಚ್ಚಾಯಿತು. ಇದರ ಪ್ರಕಾರ `ರಾಜ್ಯ ಶೋಷಣೆ ಮತ್ತು ದಬ್ಬಾಳಿಕೆಗಾಗಿ ನಿರ್ಮಿಸಿ ಉಪಯೋಗಿಸಿದ ಒಂದು ವಿಶಿಷ್ಟವಾದ ಉಪಕರಣ ಅಥವಾ ಸಾಧನ. ಸಮಾಜ ವಿಕಾಸದಲ್ಲಿ ರಾಜ್ಯ ಶೋಷಣೆ ಮತ್ತು ವರ್ಗ ಹೋರಾಟದಿಂದ ಉಗಮ ಹೊಂದಿದ್ದು ಶೋಷಣೆ ಕೊನೆಗೊಂಡಾಗ ರಾಜ್ಯ ಕೊನೆಗಾಣುವುದು. ಇಂಥ ಸಮಾಜವನ್ನು ನಿರ್ಮಿಸುವುದು ಸಮಾಜವಾದಿ ಅರ್ಥವ್ಯವಸ್ಥೆಯಿಂದ ಮಾತ್ರ ಸಾಧ್ಯ. ಅಲ್ಲಿಯವರೆಗೆ ರಾಜ್ಯ ಅಗತ್ಯ; ಇದನ್ನು ಯಾರೂ ರದ್ದುಗೊಳಿಸುವುದಿಲ್ಲ. ಕಮ್ಯುನಿಸ್ಟ್ ಸಮಾಜ ರೂಪುಗೊಂಡಂತೆ ರಾಜ್ಯ ತನ್ನಷ್ಟಕ್ಕೆ ತಾನೇ ಅಳಿದು ಹೋಗುವುದು. ಅನಂತರ ಮಾನವೀಯ ಸಂಬಂಧಗಳ ವ್ಯವಸ್ಥೆ ಸಹಕಾರಿ ಮನೋಭಾವದಿಂದ ಏರ್ಪಡುವುದು.

ಮಾಕ್ರ್ಸ್‍ವಾದದ ಈ ವಿಚಾರ ಅರಾಜಕತಾವಾದವನ್ನು ನೆನಪಿಗೆ ತರುತ್ತದೆ. ಅರಾಜಕತಾವಾದದ ಪ್ರಕಾರ ರಾಜ್ಯ ಹಿಂಸೆ, ಶೋಷಣೆ ಮತ್ತು ದಬ್ಬಾಳಿಕೆಗಳ ಸಾಧನೆಯಾಗಿರುವುದರಿಂದ ರಾಜ್ಯವನ್ನು ರದ್ದುಗೊಳಿಸದೇ ಒಳ್ಳೆಯ ಸಮಾಜವನ್ನು ನಿರ್ಮಿಸುವುದು ಸಾಧ್ಯವಿಲ್ಲ. ಮನುಷ್ಯ ಸ್ವಭಾವತಃ ಸಹಕಾರೀ ಮನೋಭಾವ ಉಳ್ಳವನು. ಸಹಕಾರ ಮತ್ತು ಶಾಂತಿ ಮಾನವ ಜೀವನದ ಹೆಗ್ಗುರುತು, ಸಂಘರ್ಷ ಮತ್ತು ಹಿಂಸೆಯಲ್ಲ. ರಾಜ್ಯವನ್ನು ರದ್ದುಗೊಳಿಸಿ ಸಹಕಾರಿ ಸಮಾಜದ ರಚನೆ ಮಾಡುವುದೇ ಈ ವಾದದ ಗುರಿ.

ಅರಾಜಕತಾವಾದ ಮತ್ತು ಮಾಕ್ರ್ಸ್‍ವಾದದ ನಡುವಿನ ಕೆಲವು ಮುಖ್ಯಭೇದಗಳೆಂದರೆ ಮಾಕ್ರ್ಸ್‍ವಾದ ರಾಜ್ಯವನ್ನು ಸಾಮಾಜಿಕ, ಆರ್ಥಿಕ ಸಿದ್ಧತೆಯಿಲ್ಲದೆ ರದ್ದುಗೊಳಿಸುವುದನ್ನು ಒಪ್ಪುವುದಿಲ್ಲ. ಸಮಾಜವಾದಿ ಅರ್ಥವ್ಯವಸ್ಥೆಯ ಗುರಿ ಸಾಧಿಸುವವರಿಗೆ ಅಂದರೆ ಕಮ್ಯುನಿಸ್ಟ್ ಸಮಾಜ ಉದ್ಭವಿಸುವವರೆಗೆ ರಾಜ್ಯದ ಅಸ್ತಿತ್ವಬೇಕು. ರಾಜ್ಯರಹಿತ ಸಮಾಜವನ್ನು ಸ್ಥಾಪಿಸುವ ಮುನ್ನ ವರ್ಗರಹಿತ ಸಮಾಜವನ್ನು ಸಾಧಿಸಬೇಕು. ವರ್ಗರಹಿತ ಸಮಾಜವೆಂದರೆ, ಕಮ್ಯುನಿಸ್ಟ್‍ಸಮಾಜ. ಇದರ ಉದ್ಭವದೊಡನೆ ರಾಜ್ಯ ತಾನಾಗಿ ಅದೃಶ್ಯವಾಗುತ್ತದೆ.

ಗಾಂಧೀಜಿಯವರ ಸರ್ವೋದಯವಾದದಲ್ಲಿ ಈ ವಿಚಾರಸರಣಿಯ ಕೆಲವು ಅಂಶಗಳನ್ನು ಕಾಣಬಹುದು. ಅವರ ರಾಜ್ಯ ಸಿದ್ಧಾಂತವನ್ನು ತಾತ್ತ್ವಿಕ ಅರಾಜಕತಾವಾದವೆಂದು ಕರೆಯಲಾಗಿದೆ. ಅವರು ಅಹಿಂಸೆಗೆ ಕೊಟ್ಟ ವ್ಯಾಪಕ ಅರ್ಥವನ್ನು ನಾವೆಲ್ಲರೂ ಬಲ್ಲೆವು. ಮಾನವನ ಅಂತರಂಗ ದೇವಮಾನವ ಶಕ್ತಿಗಳ ಕುರುಕ್ಷೇತ್ರವೇ ಸರಿ. ಒಂದೆಡೆ ಪ್ರೇಮ, ತ್ಯಾಗ ಮುಂತಾದವು, ಮತ್ತೊಂದೆಡೆ ಕಾಮ, ಸ್ವಾರ್ಥ ಮುಂತಾದವು. ಒಂದೆಡೆ ಧರ್ಮ ಇನ್ನೊಂದೆಡೆ ಅಧರ್ಮ. ಅಧರ್ಮವನ್ನು ತೊರೆಯಲು ಮತ್ತು ಧರ್ಮವನ್ನು ಸಾಧಿಸಲು ಬೇಕಾದ ನೈತಿಕ ಅನುಶಾಸನವೆ ಅಹಿಂಸೆ, ಅಹಿಂಸೆಯನ್ನು ಸಂಪೂರ್ಣವಾಗಿ ಅಳವಡಿಸಿಕೊಂಡವನು ಜೀವತ್ವವನ್ನು ಸಾಧಿಸುವಂತೆ, ಎಲ್ಲರೂ ಪರಿಪೂರ್ಣತೆಯನ್ನು ಹೊಂದಲು ಸತ್ಯನಿಷ್ಠೆಯಿಂದ ಹೆಣಗಬೇಕು. ಆದರೂ ಅಪರಿಪೂರ್ಣ ಮಾನವನಿಗೆ ಪರಿಪೂರ್ಣತೆ ಸಾಧ್ಯವಿಲ್ಲ. ವಿವಿಧ ರೂಪಗಳಲ್ಲಿ ಕಟ್ಟಳೆ, ಬಾಹ್ಯ ನಿಬಂಧನೆಗಳಲ್ಲದೆ ಸಾಮಾಜಿಕ ಜೀವನ ಸರಾಗವಾಗಿ ನಡೆಯುವುದಿಲ್ಲ. ಸಮಾಜದಲ್ಲಿ ಪರಿಪೂರ್ಣ ಅಹಿಂಸೆ ನೆಲೆಸಿದಾಗ ರಾಜ್ಯ ಅನವಶ್ಯ ಎನಿಸುವುದು. ವ್ಯಾವಹಾರಿಕವಾಗಿ ಹೇಳಬೇಕಾದ ಅಹಿಂಸೆ ಪರಿಪೂರ್ಣತೆ ಹೊಂದುವಂತೆ ರಾಜ್ಯ ಸಹ ಅಳಿಯುವುದು.

ರಾಜ್ಯಶಾಸ್ತ್ರದ ವ್ಯಾಪ್ತಿ, ಜಟಿಲತೆ ಮತ್ತು ಮಹತ್ತ್ವವನ್ನು ನಾವು ಗಮನಿಸಬೇಕು. ಸಾಮಾಜಿಕ ಭದ್ರತೆಯಿಂದ ಆರಂಭಿಸಿ ಮಾನವ ಜೀವನದ ಉದಾತ್ತ ಧ್ಯೇಯ ಮತ್ತು ಗುರಿಗಳ ಸಾಧನೆಯವರೆಗೆ ರಾಜ್ಯದ ಪಾತ್ರ ಮಹತ್ತ್ವವಾದದ್ದು. ವ್ಯಕ್ತಿ ಸಮಾಜ ಮತ್ತು ರಾಜ್ಯದ ಪರಸ್ಪರ ಸಂಬಂಧಗಳು ರಾಜ್ಯಶಾಸ್ತ್ರಕ್ಕೆ ಹಲವಾರು ಜಟಿಲ ಸಮಸ್ಯೆಗಳನ್ನೊದಗಿಸಿವೆ. ಇವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾದರೆ ಮಾನವ ಸ್ವಭಾವ ಮತ್ತು ಸಮಾಜ ರಚನೆಯ ಬಗ್ಗೆ ಆಳವಾದ ಜ್ಞಾನ ಅಗತ್ಯ. ಆದರೂ ಒಂದೆರಡು ಅಭಿಪ್ರಾಯಗಳನ್ನು ಇಲ್ಲಿ ಗಮನಿಸಬಹುದು. ಸತ್ಯ ಎರಡು ಅತಿರೇಕ ಬಿಂದುಗಳ ನಡುವೆ ಇರುತ್ತದೆಂಬುದು ಜ್ಞಾನಿಗಳ ಮಾತು. ಅರಾಜಕತಾವಾದ ಮತ್ತು ಹೆಗಲನ ಸರ್ವತಂತ್ರ ರಾಜ್ಯದವಾದ ಎರಡು ಅತಿರೇಕ ಬಿಂದುಗಳಂತೆ ಅರಾಜಕತಾವಾದ ಮಾನವ ಸ್ವಭಾವದ ಬಗ್ಗೆ ಅವಾಸ್ತವಿಕ ಅಭಿಪ್ರಾಯ ತಳೆದಿದ್ದು. ರಾಜ್ಯದ ಬಗ್ಗೆ ಅದರ ವಿಚಾರ ಸರಣಿ ಅನುಭವದ ಒರೆಗಲ್ಲಿಗೆ ನಿಲ್ಲುವಂತಿಲ್ಲ. ಅದರಂತೆಯೇ ವ್ಯಕ್ತಿ ಮತ್ತು ಇತರ ಸಾಮಾಜಿಕ ಅಂಗಗಳನ್ನು ಬಲಿಕೊಡುವ ವಿಷಯವೂ ಸೂಕ್ತವಲ್ಲ. ಸಮಾಜದಲ್ಲಿಯ ಸಂಘ ಸಂಸ್ಥೆಗಳ ಸ್ವಾಯತ್ತತೆಯನ್ನು ಎತ್ತಿಹಿಡಿಯಲು ಅನೇಕ ಸಿದ್ಧಾಂತಗಳನ್ನು ಈ ಶತಮಾನದ ಮೊದಲನೆಯ ದಶಕಗಳಲ್ಲಿ ಪ್ರತಿಪಾದಿಸಲಾಯಿತು. ರಾಜ್ಯದ ಅಧಿಕಾರ ವ್ಯಾಪ್ತಿಯನ್ನು ಬಹಳ ಕಡಿಮೆಮಾಡುವ ಈ ಸಿದ್ಧಾಂತಗಳು ಅವ್ಯವಹಾರಿಕವೆಂದು ಪರಿಗಣಿಸಲಾಗಿದೆ.

ಆಧುನಿಕ ಮನೋವಿಜ್ಞಾನ ಮತ್ತು ಸಮಾಜ ವಿಜ್ಞಾನಗಳು ಗಮನಾರ್ಹ ಪ್ರಗತಿಸಾಧಿಸಿದರೂ ಮಾನವ ಸ್ವಭಾವ ಮತ್ತು ಸಮಾಜ ರಚನೆಯ ಬಗ್ಗೆ ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಮನುಷ್ಯ ಸಹಜವಾಗಿ ಸಾಮಾಜಿಕ ಭದ್ರತೆ ಮತ್ತು ಕ್ರಮವನ್ನು ಕಾಪಾಡಿಕೊಂಡು ಹೋದರೆ, ಬಾಹ್ಯ ನಿಬಂಧನೆಯ ಆವಶ್ಯಕತೆ ಇರುತ್ತಿರಲಿಲ್ಲ. ಅವನ ನೈತಿಕ ಬೆಳೆವಣಿಗೆ ಆ ಮಟ್ಟಕ್ಕೆ ಬರುವ ತನಕ ರಾಜ್ಯದ ಆವಶ್ಯಕತೆ ಇರುತ್ತದೆ. ಬಾಹ್ಯ ನಿಬಂಧನೆ ಸಾಮಾಜಿಕ ಜೀವನದ ಒಂದು ಅಗತ್ಯವಾದ ಅಂಗ. ಇದು ಪರಿವಾರದಲ್ಲಿ, ಸಂಘ ಸಂಸ್ಥೆಗಳಲ್ಲಿ ಕಂಡುಬರುತ್ತದೆ. ಈ ಅರ್ಥದಲ್ಲಿ ನಾವು `ಸರ್ಕಾರವನ್ನು ಎಲ್ಲೆಡೆಯಲ್ಲಿಯೂ ಕಾಣಬಹುದು. ರಾಜ್ಯ ಮತ್ತು ಅದರ ಅಂಗವಾದ `ಸರ್ಕಾರ ಈ ಸಾಮಾಜಿಕ ಪ್ರಕ್ರಿಯೆಯ ಒಂದು ವಿಶಿಷ್ಟವಾದ ಅಭಿವ್ಯಕ್ತಿ ಅಥವಾ ಸ್ವರೂಪವೆಂದು ಹೇಳಬಹುದು.
(ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ